Welcome!
This blog is meant for English teachers.
Search This Blog
Wednesday, August 21, 2013
Thursday, August 15, 2013
Sunday, August 11, 2013
ವಿಕ್ರಮ್ ಸಾರಾಭಾಯಿ
'ಭಾರತೀಯ ಅಂತರಿಕ್ಷ ಕಾರ್ಯಗಳ ಜನಕ'ರೆಂದು ಪ್ರಸಿದ್ಧರಾದ ವಿಕ್ರಮ್ ಸಾರಾಭಾಯಿ ಅವರು ಜನಿಸಿದ್ದು 12 ಆಗಸ್ಟ್ 1919ರ ವರ್ಷದಲ್ಲಿ. ಭಾರತದ ಪ್ರಪ್ರಥಮ ಉಪಗ್ರಹ 'ಆರ್ಯಭಟ'ದ ಉಡಾವಣೆಯ ಹಿಂದೆ ಇದ್ದ ಪ್ರಮುಖ ಶಕ್ತಿ ವಿಕ್ರಮ್ ಸಾರಾಭಾಯಿ. ಅದು ಕಕ್ಷೆ ಸೇರಿದ್ದು 1975ರಲ್ಲಿ, ಆದರೆ ಸಾರಾಭಾಯಿಯವರು 1971 ರಲ್ಲೇ ದೇಹತ್ಯಾಗ ಮಾಡಿದ್ದರು. ಆ ಸಮಯಕ್ಕಾಗಲೇ ಅವರು ಮಾಡಿದ್ದ ಕೆಲಸಗಳು, ಬೆಳೆಸಿದ್ದ ಸಂಸ್ಥೆಗಳು, ಕಂಡಿದ್ದ ಕನಸು ಅನೇಕ.
ವಿಕ್ರಮ್ ಸಾರಾಭಾಯಿಯವರು ಜನಿಸಿದ ಸಮಯದಲ್ಲಿ ಸಾರಾಭಾಯಿ ಕುಟುಂಬ ಗುಜರಾತಿನ ಪ್ರತಿಷ್ಠಿತ ವರ್ತಕ ಸಮುದಾಯದಲ್ಲಿ ಒಂದಾಗಿತ್ತು. ವಿಕ್ರಮ್ ಅಂಬಾಲಾಲ್ ಸಾರಾಭಾಯಿಯವರು ಅಂಬಾಲಾಲ್ ಸಾರಾಭಾಯಿ ಮತ್ತು ಸರಳಾ ದೇವಿಅವರ ಎಂಟನೇ ಪುತ್ರ. ಅವರ ತಂದೆ ಅಂಬಾಲಾಲರು ಗುಜರಾತಿನ ಅನೇಕ ಗಿರಣಿಗಳ ಸ್ವಾಮ್ಯವನ್ನು ಹೊಂದಿದ್ದವರು. ತಾಯಿ ಸರಳಾ ದೇವಿ ಅವರು ಅಂದಿನ ದಿನಗಳಲ್ಲಿ ಪ್ರವರ್ಧಮಾನದಲ್ಲಿದ್ದ ಮಾಂಟೆಸ್ಸರಿ ಶಾಲೆಯನ್ನು ಸ್ಥಾಪಿಸಿದ್ದರು. ಸ್ವಾತಂತ್ರ ಚಳುವಳಿಗೆ ಕಟ್ಟಾ ಬೆಂಬಲಿಗರಾಗಿದ್ದ ಇವರ ಮನೆಗೆ ಮಹಾತ್ಮ ಗಾಂಧೀಜಿ, ವಲ್ಲಬಭಾಯಿ ಪಟೇಲ್, ರಬೀಂದ್ರರಂಥಹ ಮಹನೀಯರ ಭೇಟಿ ದಿನನಿತ್ಯದ ಘಟನೆಗಳಂತೆ ಜರುಗುತ್ತಿತ್ತು.
ಕೇಂಬ್ರಿಡ್ಜಿನಲ್ಲಿ ಕಾಲೇಜು ಶಿಕ್ಷಣವನ್ನು ಪಡೆದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಕೆಂದ್ರದಲ್ಲಿ ಸಿ,ವಿ. ರಾಮನ್ ಅವರ ಬಳಿ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿದ ವಿಕ್ರಮ್ ಸಾರಾಭಾಯಿ, ಕಾಸ್ಮಿಕ್ ಕಿರಣಗಳ ಬಗೆಗೆ ಅಧ್ಯಯನ ಕೈಗೊಂಡರು. ಹೀಗೆ ಭಾರತೀಯ ವಿಜ್ಞಾನ ಪರಂಪರೆಗೆ ದಾಪುಗಾಲಿಟ್ಟ ವಿಕ್ರಮ್ ಸಾರಾಭಾಯಿ ಅವರು 'ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ' ಸೇರಿದಂತೆ ಅನೇಕ ವಿಜ್ಞಾನ ಸಂಸ್ಥೆಗಳನ್ನು ಹುಟ್ಟುಹಾಕುತ್ತಾ ಇಡೀ ಭಾರತದಾದ್ಯಂತ ವಿಜ್ಞಾನದ ಬೀಜವನ್ನು ಬಿತ್ತುವಲ್ಲಿ ಯಶಸ್ವಿಯಾದರು.
ಹೋಮಿ ಬಾಬಾ ಅವರ ಉತ್ತರಾಧಿಕಾರಿಯಾಗಿ ಇಸ್ರೋ ಸಂಸ್ಥೆಯ ಎರಡನೇ ಅಧ್ಯಕ್ಷರಾಗಿ ಅವರು ಕಾರ್ಯ ನಿರ್ವಹಿಸಿದ ಪರಿ ಬೆರಗು ಹುಟ್ಟಿಸುವಂತದ್ದು. ಸಾರಾಭಾಯಿ ಅವರು ಹೋಮಿ ಜಹಂಗೀರ್ ಬಾಬಾರ ಅವರ ಬೆಂಬಲದೊಂದಿಗೆ, ‘ತುಂಭಾ’ ಹಾಗೂ ‘ಶ್ರೀಹರಿಕೋಟಾ’ ಕೇಂದ್ರಗಳಲ್ಲಿ ಮೊದಲ ಬಾರಿಗೆ ರಾಕೆಟ್ಟುಗಳ ಉಡಾವಣಾ ಕೇಂದ್ರವನ್ನು ನಿರ್ಮಿಸಿಸಿದುದು ದೇಶದ ಮಟ್ಟಿಗೆ ಒಂದು ಹೊಸ ಮೈಲುಗಲ್ಲು. ಇದು ಈಗಿನ ಇಸ್ರೋದ ಸಾಧನೆಗಳಿಗೆ ಇವರು ಹಾಕಿದ ಭದ್ರ ಬುನಾದಿಯಾಗಿದೆ ಎಂದರೆ ತಪ್ಪಾಗಲಾರದು.
ಸಾರಾಭಾಯಿ ಅವರು ವಿಜ್ಞಾನ ಕ್ಷೇತ್ರದಲ್ಲಿನ ಕಾರ್ಯದ ಜೊತೆ ಜೊತೆಗೆ ತಮ್ಮ ಕೌಟುಂಬಿಕ ಉದ್ಯಮವಾದ ಉಡುಪಿನ ತಂತ್ರಜ್ಞಾನವನ್ನೂ ಬೆಳೆಸುತ್ತಿದ್ದರು. ಆದ ಕಾರಣ ಅಹಮದಾಬಾದಿನಲ್ಲಿ ವಿಕ್ರಮ್ ಸಾರಾಭಾಯಿ ಅವರು ಸ್ಥಾಪಿಸಿದ ‘ಟೆಕ್ಸ್ಟೈಲ್ ಇಂಡಸ್ಟ್ರಿಯಲ್ ರಿಸರ್ಚ್ ಆಸೋಸಿಯೇಷನ್’ ಬಟ್ಟೆ ಉದ್ಯಮಗಳ ಅಪಾರ ಬೆಳವಣಿಗೆಗೆ ನಾಂದಿ ಹಾಡಿತು.
ವಿಕ್ರಮ್ ಸಾರಾಭಾಯಿಯವರ ಮತ್ತೊಂದು ಬಹುದೊಡ್ಡ ಕೊಡುಗೆಯೆಂದರೆ, ಸಾಂಸ್ಥಿಕ ನಿರ್ವಹಣೆಯ ವಿಷಯದಲ್ಲಿ ಹೆಚ್ಚಿನ ಶಿಕ್ಷಣ ನೀಡಲು ಅನುವಾಗುವಂತೆ "ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್" ತೆರೆದದ್ದು. ಈ ಸಂಸ್ಥೆ ಈಗ ಜಗದ್ವಿಖ್ಯಾತವಾಗಿದೆ.
ವೈಜ್ಞಾನಿಕ ಶಿಕ್ಷಣದಲ್ಲಿ ಅಪಾರ ಆಸಕ್ತಿ ಹೊಂದಿದ್ದ ವಿಕ್ರಮ್ ಸಾರಾಭಾಯಿಯವರು ಅಹಮಾದಾಬಾದಿನಲ್ಲಿ ‘ಕಮ್ಯೂನಿಟಿ ಸೈನ್ಸ್ ಸೆಂಟರ್’ ಆರಂಭಿಸಿದ್ದರು. ಪರಿಸರದ ಬಗೆಗೆ ಅಪಾರ ಕಾಳಜಿ ಹೊಂದಿದ್ದ ವಿಕ್ರಮ್ ಸಾರಾಭಾಯಿ ಅವರು ‘ಸೆಂಟರ್ ಫಾರ್ ಎನ್ವಿರಾನ್ಮೆಂಟಲ್ ಪ್ಲಾನಿಂಗ್ ಅಂಡ್ ಟೆಕ್ನಾಲಜಿ’ ಸ್ಥಾಪಿಸಿದ್ದರು. ಇದಲ್ಲದೆ ಅಂಧರ ಬದುಕಿನಲ್ಲಿನ ಏಳಿಗೆಗಾಗಿ ‘ಬ್ಲೈಂಡ್ ಮೆನ್ ಅಸೋಸಿಯೇಷನ್” ಸ್ಥಾಪಿಸಿದರು. ಕಲಾವಿಚಾರಗಳಲ್ಲಿ ವಿಕ್ರಮ್ ಸಾರಾಭಾಯಿ ಶ್ರೇಷ್ಠ ಅಭಿರುಚಿ ಹೊಂದಿದವರಾಗಿದ್ದರು. ಅವರು ಪ್ರಸಿದ್ಧ ನೃತ್ಯ ಕಲಾವಿದರಾದ ಮೃಣಾಲಿನಿ ಅವರನ್ನು ವಿವಾಹವಾಗಿದ್ದರು.
"ಅಂತರಿಕ್ಷ ವಿಜ್ಞಾನವೆಂಬುದು ನಮಗೆ ಅಭಿವೃದ್ಧಿಶೀಲ ರಾಷ್ಟ್ರಗಳ ಜೊತೆ ನಡೆಸುವ ಶೋಕಿಯ ಪೈಪೋಟಿಯಲ್ಲ, ಜನರ ಜೀವನದಲ್ಲಿ ಕಾಣಬರುವ ನಮ್ಮದೇ ಆದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ವಿಜ್ಞಾನವನ್ನು ಬಳಸುವುದರಲ್ಲಿ ವಿಶ್ವದಲ್ಲಿ ನಾವು ಯಾರೊಬ್ಬರಿಗೂ ಕಡಿಮೆಯಲ್ಲ ಎಂಬ ಆತ್ಮ ವಿಶ್ವಾಸ ನಮ್ಮಲ್ಲಿದೆ. ಇದು ನಮ್ಮ ಎಲ್ಲಾ ವೈಜ್ಞಾನಿಕ ಕಾಯಕಗಳ ಮೂಲದೃಷ್ಟಿ" ಇದು ವಿಕ್ರಂ ಸಾರಾಭಾಯಿ ಅವರ ಸ್ಪಷ್ಟ ನಿಲುವಾಗಿತ್ತು. ಇದು ಭಾರತದಂತಹ ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ರಾಷ್ಟದಲ್ಲಿ ಉತ್ಸಾಹ ಚಿಮ್ಮುವಂತೆ ಮಾಡಿತು. ವೈಜ್ಞಾನಿಕ ಅಭಿವೃದ್ಧಿಯಲ್ಲಿ ದೇಶಕ್ಕೆ ಅಪಾರ ಹೆಸರು ತಂದುಕೊಟ್ಟ ಮಹನೀಯ ವಿಕ್ರಂ ಸಾರಾಭಾಯಿ ಈ ಮಾತುಗಳು, ಅವರಲ್ಲಿ ತುಂಬಿ ತುಳುಕುತ್ತಿದ್ದ ಶ್ರದ್ಧೆ, ಕಾಳಜಿ, ಸ್ಪಷ್ಟತೆ, ಆತ್ಮವಿಶ್ವಾಸ, ದೇಶಭಕ್ತಿ ಎಲ್ಲವನ್ನೂ ಬಿಂಬಿಸುವಂತಿದೆ.
ವಿಕ್ರಂ ಸಾರಾಭಾಯಿ ಅವರಿಗೆ ಪದ್ಮಭೂಷಣ, ಮರಣೋತ್ತರವಾಗಿ ಪದ್ಮವಿಭೂಷಣ, ಭಾಟ್ನಾಗರ್ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಸಂದವು.
ವಿಕ್ರಂ ಸಾರಾಭಾಯಿ ಡಿಸೆಂಬರ್ 31, 1971ರಲ್ಲಿ ನಿಧನರಾದರು. ಇವರು ತಮ್ಮ ಇಡೀ ಜೀವನವನ್ನೂ, ಜೊತೆಗೆ ಜೀವಮಾನದ ಹಣ, ಆಸ್ತಿ ಎಲ್ಲವನ್ನೂ ದೇಶದ ವಿಜ್ಞಾನದ ಬೆಳವಣಿಗೆಗಳಿಗಾಗಿ ಮೀಸಲಿರಿಸಿದ್ದರು. ಇವರ ಜೀವನ ಕ್ರಮವೇ ನಮಗೊಂದು ಪಾಠ.
Subscribe to:
Posts (Atom)